ಬೆನಝೀರ್ ಭುಟ್ಟೊ (ಜೂನ್ ೨೧, ೧೯೫೩ - ಡಿಸೆಂಬರ್ ೨೭, ೨೦೦೭) ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಹಾಗೂ ಅಲ್ಲಿಯ ರಾಜಕೀಯ ಪಕ್ಷ "ಪಾಕಿಸ್ತಾನ್ ಪೀಪಲ್ ಪಾರ್ಟಿ"ಯ ಮುಖಂಡೆ. ಇವರು ಪಾಕಿಸ್ತಾನದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ. ಇವರು ಮಾಜಿ ಪ್ರಧಾನ ಮಂತ್ರಿ ಝುಲ್ಫಿಕರ್ ಆಲಿ ಭುಟ್ಟೋ ಅವರ ಹಿರಿಯ ಮಗಳು. ಇವರು ಎರಡು ಬಾರಿ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದರು. ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಇವರು, ಪಾಕಿಸ್ತಾನದ ರಾವಲ್‍ಪಿಂಡಿಯಲ್ಲಿ ಡಿಸೆಂಬರ್ ೨೭, ೨೦೦೭ರ ಸಂಜೆ ಗುಂಡು ಹಾಗೂ ಬಾಂಬ್ ಧಾಳಿಗೆ ಬಲಿಯಾದರು. == ಕೌಟುಂಬಿಕ ಹಾಗೂ ಶೈಕ್ಷಣಿಕ ಹಿನ್ನೆಲೆ == ಇವರು ಮುಸ್ಲಿಮರ ಪೈಕಿ ಶಿಯಾ ಜನಾಂಗಕ್ಕೆ ಸೇರಿದವರಗಿದ್ದು. ತಾಯಿಯ ಹೆಸರು ನುಸ್ರತ್ ಭುಟ್ಟೊ. ಇವರ ಪೂರ್ವಜರು ಭಾರತದ ಹರಿಯಾಣದಿಂದ ವಲಸೆ ಹೋದವರು. ಇವರ ಪ್ರಾಥಮಿಕ ವಿದ್ಯಾಭ್ಯಾಸವೆಲ್ಲ ರಾವಲ್‍ಪಿಂಡಿ ಹಾಗೂ ಕರಾಚಿಯಲ್ಲಿ ನಡಿಯಿತು. ಹೆಚ್ಚಿನ ವಿದ್ಯಾಭ್ಯಾಸವು ಅಮೆರಿಕ ದೇಶದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ (೧೯೬೬-೧೯೭೩). ಇಲ್ಲಿಯ ವಿದ್ಯಾಭ್ಯಾಸವೇ ಇವರ ಸಮಾಜವಾದೀಯ ಧೋರಣೆಗೆ ತಳಹದಿಯಾಯಿತೆಂದು ನಂಬಲಾಗುತ್ತಿದೆ. ಮುಂದಿನ ವಿದ್ಯಾಭ್ಯಾಸವು ಇಂಗ್ಲೆಂಡಿನ ಆಕ್ಸ್‍ಫರ್ಡ್ನಲ್ಲಿ (೧೯೭೩-೧೯೭೭) ಆಯಿತು. ಇವರ ಪ್ರಮುಖ ಕಲಿಕೆಯ ವಿಷಯಗಳೆಂದರೆ ತುಲನೀಯ ಸರ್ಕಾರ, ತತ್ವಶಾಸ್ತ್ರ, ರಾಜಕೀಯ ಹಾಗೂ ಅರ್ಥಶಾಸ್ತ್ರಗಳು. ೧೯೮೭ರಲ್ಲಿ ಇವರು ಅಸಿಫ್ ಆಲಿ ಜರ್ದಾರಿ ಅವರನ್ನು ಮದುವೆಯಾದರು. ಇವರಿಗೆ ಮೂವರು ಮಕ್ಕಳು.ಇವರ ತಂದೆ ಹಾಗೂ ಸಹೋದರರಿಬ್ಬರೂ ಕೂಡ ಇತರರಿಂದ ಕೊಲೆಯಾದವರು. == ರಾಜಕೀಯ ಜೀವನ ಹಾಗೂ ಅಂತ್ಯ == ಪಾಕಿಸ್ತಾನಕ್ಕೆ ಎರಡು ಬಾರಿ ಪ್ರಧಾನಿಯಾದ ಇವರು, ಎರಡು ಸಲವೂ ಭ್ರಷ್ಟಾಚಾರದ ಆರೋಪದ ಮೇಲೆ ಉಚ್ಚಾಟಿತರಾದರು. ಎರಡನೆಯ ಬಾರಿ ಉಚ್ಚಾಟಿತರಾದ ಮೇಲೆ ಇವರು ದುಬಾಯಿಗೆ ಸ್ವೇಛ್ಚಿತವಾಗಿ ತೆರಳಿದರು. ೨೦೦೭ರ ಅಕ್ಟೋಬರಿನಲ್ಲಿ ಪಾಕಿಸ್ತಾನಕ್ಕೆ ಮರಳಿದರು. ೨೦೦೮ರ ಜನವರಿಯಲ್ಲಿ ಚುನಾವಣೆಯಲ್ಲಿ ಮೂರನೇ ಬಾರಿಗೆ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ಇವರು ಚುನಾವಣಾ ಪ್ರಚಾರದಲ್ಲಿದ್ದಾಗಲೇ ಭಯೋತ್ಪಾದಕರ (ಸಾಬೀತಾಗಿಲ್ಲ) ಧಾಳಿಗೆ ಬಲಿಯಾದರು.